ಮಂಗಳವಾರ, ಜುಲೈ 15, 2014

ಮಿರೊಸ್ಲಾವ್​ ಮ್ಯಾಜಿಕ್


ಫಿಫಾ  ವಿಶ್ವಕಪ್​ನಲ್ಲಿ ಎಂದು ಮರೆಯಲಾಗದ ಹೆಸರು ಜರ್ಮನಿಯ ಮಿರೊಸ್ಲಾವ್​ ಕ್ಲೋಸ್​. ಜರ್ಮನಿ ಪರವಾಗಿ ಅತಿಹೆಚ್ಚು ಗೋಲ್​ ಹೊಡೆದ, ಹೆಚ್ಚು ಸಲ ತಂಡದ ಗೆಲುವಿಗೆ ಕಾರಣವಾದ ಏಕೈಕ ಆಟಗಾರ. ವಿಶ್ವಕಪ್​ನಲ್ಲಿ ಅತಿಹೆಚ್ಚು ಗೋಲ್​ ಹೊಡೆದ ದಾಖಲೆ ಇವರ ಹೆಸರಲ್ಲಿದೆ. ಅಷ್ಟೇ ಅಲ್ಲ ವಿಶ್ವಕಪ್​ನಲ್ಲಿ ಅನೇಕ ರೋಚಕ ಸಂಗತಿಗಳಿಗೆ ಇವರು ಕಾರಣರಾಗಿದ್ದಾರೆ...

ಮಿರೊಸ್ಲಾವ್​ ಕ್ಲೋಸ್​ ದಿ ಗಾಡ್​ ಆಫ್​ ಹೆಡರ್​. ಫಿಫಾ ವಿಶ್ವಕಪ್​ನ ವಿಭಿನ್ನ ಪಯಣಿಗ.  ಇದುವರೆಗೂ ವರ್ಲ್ಡ್​ಕಪ್​ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಏಕೈಕ ಆಟಗಾರ ಕ್ಲೋಸ್​. ಫಿಫಾ ವಿಶ್ವಕಪ್​ ಗೆಲುವಿನೊಂದಿಗೆ ಕ್ಲೋಸ್​ ಫುಟ್ಬಾಲ್​ಗೆ ವಿದಾಯ ಹೇಳಿದ್ರು. ಅರ್ಥಪೂರ್ಣ ರೀತಿಯಲ್ಲಿ ತಮ್ಮ ಫುಟ್ಬಾಲ್ ಪಯಣಕ್ಕೆ  ಪೂರ್ಣ ವಿರಾಮವಿಟ್ರು.

 2002 ವಿಶ್ವಕಪ್​ನಿಂದಲೂ ಕ್ಲೋಸ್​ ಜರ್ಮನಿ ತಂಡದ ಅವಿಭಾಜ್ಯ ಅಂಗವಾಗಿದ್ರು. ಪ್ರತಿ ಟೂರ್ನಿಯಲ್ಲೂ ಗೋಲ್​ ಹೊಡೆದ ಆಟಗಾರ. 2002ರಲ್ಲಿ ಜರ್ಮನಿ ಫೈನಲ್​ವರೆಗೂ ಪ್ರಯಾಣ ಬೆಳೆಸಿತು. ಆದ್ರೆ ಫೈನಲ್​ನಲ್ಲಿ ಬ್ರೆಜಿಲ್​ ವಿರುದ್ಧ ಸೋಲುವ ಮೂಲಕ ವಿಶ್ವಕಪ್​ಗೆ ವಿದಾಯ ಹೇಳ್ತು. ಕೂದಲೆಳೆಯಲ್ಲಿ ವಿಶ್ವ ಚಾಂಪಿಯನ್​ ಆಗುವ ಪಟ್ಟ ಮಿಸ್​ ಮಾಡಿಕೊಳ್ತು. ಜರ್ಮನಿ ಸೋತ್ರು ಆಗ ಗಮನ ಸೆಳೆದಿದ್ದು ಮಾತ್ರ ಯುವ ಆಟಗಾರ ಕ್ಲೋಸ್​.

ಜರ್ಮನಿಗಾಗಿ ಕ್ಲೋಸ್​ 71 ಗೋಲ್​ ದಾಖಲಿಸಿದ್ದಾರೆ. ಇಷ್ಟೆ ಅಲ್ಲ ಫಿಫಾ ವಿಶ್ವಕಪ್​ನಲ್ಲಿ ಅವರು ಗೋಲ್​ ಹೊಡೆದ ಯಾವ ಪಂದ್ಯದಲ್ಲೂ ಜರ್ಮನಿ ಸೋತಿಲ್ಲ ಅನ್ನುವುದು ಅಷ್ಟೇ ವಿಶೇಷ. ವಿಶ್ವಕಪ್​ನನಲ್ಲಿ ಒಟ್ಟು 16 ಗೋಲ್​ ಹೊಡೆದಿರುವುದು ಕೂಡ ವಿಶ್ವ ದಾಖಲೆ. ಬ್ರೆಜಿಲ್​ ವಿರುದ್ಧ ಸೆಮಿಫೈನಲ್​ನಲ್ಲಿ ಒಂದು ಗೋಲ್​ ದಾಖಲಿಸುವ ಮೂಲಕ, ಬ್ರೆಜಿಲ್​ನ ರೊನಾಲ್ಡೊ ಹೆಸರಲ್ಲಿದ್ದ 15 ಗೋಲ್​ಗಳ ದಾಖಲೆಯನ್ನು ಮುರಿದ್ರು.

ವಿಶ್ವಕಪ್​ನಲ್ಲಿ ಅತಿಹೆಚ್ಚು ಜಯಕ್ಕೆ ಪಾತ್ರವಾದ ಏಕೈಕ ಆಟಗಾರ ಎಂಬ ಕೀರ್ತಿ ಇವರಿಗೆ ಸಲ್ಲುತ್ತೆ. ಒಟ್ಟು 17 ವಿಶ್ವಕಪ್​ ಪಂದ್ಯಗಳನ್ನು ಗೆದ್ದ ಸಮಯದಲ್ಲಿ ಕ್ಲೋಸ್​ ಜರ್ಮನಿ ತಂಡದ ಸದಸ್ಯರಾಗಿದ್ರು ಎಂಬುವುದು ಅಷ್ಟೇ ವಿಶೇಷ.

ಅದೇನೊ ಗೊತ್ತಿಲ್ಲ ಕಳೆದ ಮೂರು ವಿಶ್ವಕಪ್​ನಲ್ಲಿ ಅರ್ಜೆಂಟೀನಾ ತಂಡ ಜರ್ಮನಿಗೆ ಮಣಿದಿದೆ. ಅರ್ಜೆಂಟೀನಾ ಸೋತ ಮೂರು ಸನ್ನಿವೇಶದಲ್ಲೂ ಮಿರೊಸ್ಲಾವ್​ ಕ್ಲೋಸ್​ ಜರ್ಮನಿ ತಂಡದಲ್ಲಿದ್ರು. 2002, 2006ರಲ್ಲಿ ಅರ್ಜೆಂಟೀನಾವನ್ನು ಕ್ವಾರ್ಟರ್​ಫೈನಲ್​ನಲ್ಲಿ ಸೋಲಿಸಿದ್ರು. 2014ರಲ್ಲಿ ಫೈನಲ್​ನಲ್ಲಿ ಸೋಲಿನ ರುಚಿ ತೋರುವ ಮೂಲಕ, ಅರ್ಜೆಂಟೀನಾ ಗೆಲುವಿನ ಕನಸಿಗೆ ಬ್ರೇಕ್​ ಹಾಕಿದ್ರು.
ವಿಶ್ವಕಪ್​ ಫೈನಲ್​ ಪಂದ್ಯಕ್ಕೂ ಮುನ್ನ ಕ್ಲೋಸ್​ ತಾವು ವಿಶ್ವಕಪ್​ ವಿದಾಯ ಹೇಳುವುದಾಗಿ  ಘೋಷಣೆ ಮಾಡಿದ್ರು. ಹಾಗಾಗಿ ಅರ್ಜೆಂಟೀನಾ ವಿರುದ್ಧದ ಪಂದ್ಯ ಕ್ಲೋಸ್​​ ಅತ್ಯಂತ ಮುಖ್ಯವಾಗಿತ್ತು. ಜರ್ಮನಿ ಆಟಗಾರರು ಕೂಡ ಈ ಕಾಲ್ಚೆಂಡು ಮಾಂತ್ರಿಕನಿಗೆ ಅದ್ಧೂರಿ ಬಿಳ್ಕೊಡೆಗೆ ನೀಡುವ ಇರಾದೆಯಲ್ಲಿತ್ತು. ಹಲವು ಸಲ ಕೂದಲೆಳೆಯಲ್ಲಿ ಸೋತಿದ್ದ ಜರ್ಮನಿ ಈ ಸಲ ಗೆಲ್ಲುವ ವಿಶ್ವಾಸದಲ್ಲಿತ್ತು. ಆದ್ರೆ ಕ್ಲೋಸ್​, ಮುಲ್ಲರ್ ಎಷ್ಟೇ ಪ್ರಯತ್ನ ಪಟ್ರು ಗೋಲ್​ ದಾಖಲಿಸುವಲ್ಲಿ ವಿಫಲವಾದ್ರು. 88ನೇ ನಿಮಿಷದಲ್ಲಿ ಕ್ಲೋಸ್​ ಮೈದಾನ ಬಿಟ್ಟು ಹೊರ ಬರುವಾಗ ಇಡೀ ಕ್ರೀಡಾಂಗಣ ಎದ್ದು ನಿಂತು ಈ ಆಟಗಾರನಿಗೆ ಗೌರವ ಸೂಚಿಸಿತು. ಫುಟ್ಬಾಲ್​ ಲೋಕದಲ್ಲಿ ಹಲವರು ಜರ್ಮನಿ ತಂಡವನ್ನು ದ್ವೇಷಿಸಬಹುದು. ಆದರೆ ಕ್ಲೋಸ್​ ಆಟವನ್ನು ದ್ವೇಷಿಸುವರು ಜಗತ್ತಿನ ಯಾವ ಮೂಲೆಯಲ್ಲೂ ಸಿಗಲ್ಲ ಅಷ್ಟೊಂದು ಅದ್ಭುತ ಆಟಗಾರ ಇವರು.

 88ನೇ ನಿಮಿಷದಲ್ಲಿ ವಿಶ್ವಕಪ್​ ದಾಖಲೆ ವೀರ ಮೈದಾನ ಬಿಟ್ಟು ಹೊರಬಂದಾಗ ಅವರ ಸ್ಥಾನದಲ್ಲಿ ಆಡಲು ಒಳಗೆ ಬಂದವರು 22 ವರ್ಷದ ಮಾರಿಯೊ ಗೋಯೆಟ್ಜ್​ . ಕ್ಲೋಸ್​ ಈ ಆಟಗಾರನಿಗೆ ಕೆಲ ಟಿಪ್ಸ್​ ನೀಡಿ ಕಳಿಸಿದ್ರು. ಕ್ಲೋಸ್​ ಜಾಗದಲ್ಲಿ ಆಡಿದ ಗೋಯೆಟ್ಜ್​ ಗೋಲ್​ ಹೊಡೆಯುವ ಮೂಲಕ ಜಯದ ರೂವಾರಿಯಾದ್ರು. ತಮ್ಮ ತಂಡದ ಅನುಭವಿ ಹಿರಿಯ ಆಟಗಾರನಿಗೆ ವಿಶ್ವಕಪ್​ ಟ್ರೋಫಿ ಮೂಲಕ ಬಿಳ್ಕೊಡುಗೆ ನೀಡಿದ್ರು. ವಿಶ್ವಕಪ್​ ದಾಖಲೆ ವೀರ ಕೊನೆಗೂ ವಿಶ್ವಕಪ್​ ಎತ್ತಿಹಿಡಿಯುವ ಮೂಲಕ ತಮ್ಮ ಅದ್ಭುತ ಫುಟ್ಬಾಲ್​ ಪ್ರಯಾಣಕ್ಕೆ ಪೂರ್ಣ ವಿರಾಮವಿಟ್ರು.


ರವಿ.ಎಸ್​

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ